ಚೇಂಬರ್ಲಿನ್, ಓವನ್

1920-. ಅಮೆರಿಕ ದೇಶದ  ಭೌತ ವಿಜ್ಞಾನಿ. ಸಾನಫ್ರಾನ್ಸಿಸ್ಕೊದ ಕ್ಯಾಲಿಪೋರ್ನಿಯದಲ್ಲಿ 1920ರ ಜುಲೈ 10ರಂದು ಜನನ. ಡಾರ್ಟ್ ಮೊತ್ ಕಾಲೇಜಿನಲ್ಲಿ ಸ್ನಾತಕ ಪದವಿಯನ್ನುಗಳಿಸಿ (1941) ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಇಲಾಖೆಯನ್ನು ಸಂಶೋಧಕ ವಿದ್ಯಾರ್ಥಿಯಾಗಿ ಸೇರಿದ. ಮೊದಲಿಗ ಜೀವಶಾಸ್ತ್ರದಲ್ಲಿ ಆಸಕ್ತಿ ಇದ್ದಿತಾದರೂ ಎಮಿಲಿಯೋ ಸೇಗ್ರೆ ಎಂಬ ಪ್ರಸಿದ್ಧ ಭೌತ ವಿಜ್ಞಾನಿಯ ಪರಿಚಯದ ಪರಿಣಾಮವಾಗಿ ಈ ಆಸಕ್ತಿ ಭೌತಶಾಸ್ತ್ರದತ್ತ ಹೊರಳಿತು. ಈ ವಿಜ್ಞಾನಿಯ ಪರಿಚಯದ ಪರಿಣಾಮವಾಗಿ ಈ ಆಸಕ್ತಿ ಭೌತಶಾಸ್ತ್ರದತ್ತ ಹೊರಳಿತು. ಈ ವಿಜ್ಞಾನಿಯ ಹಿರಿತನದಲ್ಲಿ ನಡೆಯುತ್ತಿದ್ದ ಮಾನ್‍ಹಾಟನ್ ಯೋಜನೆಯಲ್ಲಿ 1942 ರಿಂದ 1946 ರ ವರೆಗೆ ಪರಮಾಣು ಬಾಂಬ್ ನಿರ್ಮಾಣದ ಮೇಲೆ ಕೆಲಸ ಮಾಡಿದ. ಎರಡನೆಯ ಮಹಾಯುದ್ಧ ಮುಗಿದ ಬಳಿಕ ಚೇಂಬರ್ಲಿನ್ ಇಲಿನಾಯ್ ಸಂಸ್ಥಾನದ ಷಿಕಾಗೋ ನಗರದ ಬಳಿ ಇರುವ ಆರ್ಗೋನೆ ರಾಷ್ಟ್ರೀಯ ಪ್ರಯೋಗ ಶಾಲೆಯನ್ನು ಸೇರಿ ಮತ್ತೊಬ್ಬ ಪ್ರಖ್ಯಾತ ವಿಜ್ಞಾನಿ ಎನ್ರಿಕೋ ಫರ್ಮಿಯೊಂದಿಗೆ (ನೋಡಿ- ಫರ್ಮಿ,-ಎನ್ರಿಕೊ) ಕೆಲಸ ಮಾಡಿದ. ದ್ರವ್ಯಗಳಿಂದ ನ್ಯೂಟ್ರಾನುಗಳ ನಮನ (ನ್ಯೂಟ್ರಾನ್ ಡಿಫ್ರ್ಯಾಕ್ಷನ್ ಫ್ರಮ್ ಲಿಕ್ವಿಡ್ಸ್) ಎಂಬ ವಿಷಯದ ಬಗ್ಗೆ ಸಂಶೋದನೆ ನಡೆಸಿ ಡಾಕ್ಟರೇಟ್ ಪದವಿಯನ್ನುಗಳಿಸಿದ (1949). ತರುವಾಯ ಬರ್ಕ್‍ಲಿಗೆ ಅಧ್ಯಾಪಕನಾಗಿ ಹಿಂತಿರುಗಿ ಪುನಃ ಸೇಗ್ರೆಯೊಂದಿಗೆ ಅಧ್ಯಯನ ಪ್ರಾರಂಭಿಸಿದ. ಅಧ್ಯಯನದ ವಿಷಯ ಅಲ್ಪ ಕಣಗಳ ಕ್ಷಯ ((-ಪಾರ್ಟಿಕಲ್ ಡಿಕೆ) ಮತ್ತು ನ್ಯೂಕ್ಲಿಯಾನ್-ನ್ಯೂಕ್ಲಿಯಾನ್ ಚದರಿಕೆ (ಸ್ಕ್ಯಾಟರಿಂಗ್), ಲಾರೆನ್ಸ್ ವಿಕಿರಣ ಪ್ರಯೋಗಾಲಯದ ಉಚ್ಚ ಶಕ್ತಿ ಬೀವಾಟ್ರಾನ್ ಎಂಬ ವೇಗೋತ್ಕರ್ಷಕ ಯಂತ್ರವನ್ನು ಸ್ಥಾಪಿಸಿದ ಬಳಿಕ ಅದರಲ್ಲಿ ಉಂಟಾಗುವ ಪ್ರಬಲವಾದ ಪ್ರೋಟಾನುಗಳನ್ನು ಉಪಯೋಗಿಸಿ ಆಂಟಿಪ್ರೋಟಾನುಗಲನ್ನು ಈತ ಉತ್ಪಾದಿಸಿದ (1955). (ಎಲ್ಲ ಪರಮಾಣುಗಳಲ್ಲೂ ಪ್ರೋಟಾನ್ ಎಂಬ ಧನ ಕಣಗಳಿರುತ್ತವೆ. ಆಂಟಿ ಪ್ರೋಟಾನುಗಳು ಪ್ರೋಟಾನಿನಂತೆಯೇ ಇರುವ ಋಣ ಕಣಗಳು). ಇಂಥ ಕಣಗಳಿರಬೇಕೆಂದು ಬಹಳ ಕಾಲದಿಂದ ಶಂಕಿಸಲಾಗಿದ್ದ ಆಂಟಿಪ್ರೋಟಾನುಗಳನ್ನು ಆವಿಷ್ಕರಿಸಿದ ಸೇಗ್ರೆ ಮತ್ತು ಚೇಂಬರ್‍ಲಿನವರಿಗೆ 1959ನೆಯ ಸಾಲಿನ  ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ ದೊರೆಯಿತು.
(ಎನ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ